ಜಲವಿದ್ಯುಚ್ಛಕ್ತಿ -
	ಔನ್ನತ್ಯದಲ್ಲಿ ಶೇಖರಗೊಂಡಿರುವ ನೀರಿನ ವಿಭವ ಶಕ್ತಿಯನ್ನು ಚಲನಶಕ್ತಿಯಾಗಿ ಮಾರ್ಪಡಿಸಿ ಅದರ ನೆರವಿನಿಂದ ಉತ್ಪಾದಿಸಲಾದ ವಿದ್ಯುಚ್ಛಕ್ತಿ(ಹೈಡ್ರೋಎಲೆಕ್ಟ್ರಿರಿಕ್ ಪವರ್). ಉತ್ಪಾದಿಸಲು ಬಳಸುವ ಮೂರು ಮುಖ್ಯ ವಿಧಾನಗಳ ಪೈಕಿ ಇದು ಒಂದು. ಉಳಿದ ಎರಡು ವಿಧಾನಗಳೆಂದರೆ ಫಾಸಿಲ್ ಇಂಧನ ಜನಿತ ವಿದ್ಯುಚ್ಛಕ್ತಿ, ಮತ್ತು ನ್ಯೂಕ್ಲಿಯರ್ ಇಂಧನ ಜನಿತ ವಿದ್ಯುಚ್ಛಕ್ತಿ. ಜಲವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ವಿಧಾನವನ್ನು ಇಲ್ಲಿ ವಿವರಿಸಿದೆ.

ಎತ್ತರ ಪ್ರದೇಶದಲ್ಲಿ ಹರಿಯುತ್ತಿರುವ ನದಿಗೆ ಯೋಗ್ಯ ಸ್ಥಳದಲ್ಲಿ ಅಣೆಕಟ್ಟು ಕಟ್ಟಿ ಜಲಾಶಯವನ್ನು ನಿರ್ಮಿಸಿ ಅದರಲ್ಲಿ ಸಂಗ್ರಹವಾದ ನೀರನ್ನು ಕಾಲುವೆ ಅಥವಾ ಸುರಂಗದ ಮೂಲಕ ಒಂದು ಪ್ರವಾಹದ ಶಿಖರಕ್ಕೆ ಕೊಂಡೊಯ್ಯಲಾಗುವುದು. ಇದು ವಿಭವ ಶಕ್ತಿಯುತ ರಾಶಿ. ಪ್ರಪಾತದ ತಳದಲ್ಲಿ ಕಟ್ಟಿರುವ ವಿದ್ಯುದಾಗರದಲ್ಲಿ ತಿರುಬಾನಿಗಳೂ (ನೋಡಿ- ತಿರುಬಾನಿ) ವಿದ್ಯುಜ್ಜನಕಗಳೂ ಇರುತ್ತವೆ. ಈಗ, ಪ್ರಪಾತದ ಮೇಲಿನಿಂದ ನೀರು ಡೊಡ್ಡ ಕೊಳವೆಗಳ(ಪೆನ್‍ಸ್ಟಾಕ್ ಪೈಪ್ಸ್) ಮೂಲಕ ಕೆಳಗೆ ಧಾವಿಸಿ ವಿದ್ಯುದಾಗರದಲ್ಲಿರುವ ತಿರುಬಾನಿಗಳನ್ನು ಪ್ರವೇಶಿಸುತ್ತದೆ. ಅಂದರೆ ಈಗ ನೀರಿನ ವಿಭವಶಕ್ತಿ ಚಲನಶಕ್ತಿ ಆದಂತಾಯಿತು. ಇದನ್ನಿ ತಿರುಬಾನಿಗಳು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ತಿರುಬಾನಿಗಳಿಗೆ ಜೋಡಿಕೊಂಡಿರುವ ವಿದ್ಯುಜ್ಜನಕಗಳಿಂದ ಆಗ ವಿದ್ಯುತ್ ಪ್ರವಹಿಸುವುದು. ನೀರು ಮಂದಗತಿಯಿಂದ ಮುಂದಕ್ಕೆ ಹರಿದುಹೋಗುತ್ತದೆ. ವಿದ್ಯುತ್ತನ್ನು ಉತ್ಪಾದಿಸುವ ಈ ವಿಧಾನಕ್ಕೆ ಜಲಸಂಗ್ರಹ ವಿಧಾನ ಎಂದೂ ಹೆಸರು. ಈ ವಿಧಾನದ ಜಲ ವಿದ್ಯುತ್ಪಾದನೆಯ ವ್ಯವಸ್ಥೆಯನ್ನು ಚಿತ್ರದಲ್ಲಿ ಕಾಣಿಸಿದೆ. ನೀರನ್ನು ವಿನಿಯೋಗಿಸಿ ವಿದ್ಯುತ್ತನ್ನು ಉತ್ಪಾದಿಸುವ ಇನ್ನೊಂದು ಕ್ರಮವುಂಟು. ಅದು ನದಿಯ ಓಟವನ್ನು ಅವಲಂಬಿಸಿದೆ. ಅದರಲ್ಲಿ ಅಣೆಕಟ್ಟಿಗೆ ಬಹಳ ಸಮೀಪದಲ್ಲಿಯೇ ಇಲ್ಲವೇ ಅದಕ್ಕೆ ಹೊಂದಿಕೊಂಡಿರುವಂತೆಯೇ ವಿದ್ಯುದಾಗರಗಳು ನಿರ್ಮಿತವಾಗುವುವು. ಅಂಥ ಯೋಜನೆಗಳಲ್ಲಿ ವಿದ್ಯುದುತ್ಪಾದನೆಗೆ ಸಿಗುವ ನೀರಿನ ಎತ್ತರ ಅಣೆಕಟ್ಟಿನ ತೂಬುಗಳ ಮೇಲಿನ ಎತ್ತರಕ್ಕೆ ಸೀಮಿತವಾಗಿರುತ್ತದೆ. 

       ತಾತ್ವಿಕವಾಗಿ ನೀರಿನಿಂದ ದೊರೆಯುವ ಶಕ್ತಿ (9.81xಕಿxh) ಕಿಲೋವಾಟುಗಳು. ಇಲ್ಲಿ ಕಿ ಎಂಬುದು ಘನಮೀಟರುಗಳಲ್ಲಿ ಒಂದು ಸೆಕೆಂಡಿಗೆ ನೀರಿನ ಹರಿವ ಪ್ರಮಾಣವನ್ನೂ, h ಎಂಬುದು ಮೀಟರುಗಳಲ್ಲಿ ನೀರಿನ ಎತ್ತರವನ್ನೂ ಸೂಚಿಸುತ್ತದೆ. ಒಟ್ಟು ಜಲಶಕ್ತಿ ಸ್ಥಾವರದ ಸಮಗ್ರ ದಕ್ಷತೆಯನ್ನು 75% ಎಂದು ಭಾವಿಸಿದರೆ ಉತ್ಪಾದಿತ ವಿದ್ಯುಚ್ಛಕ್ತಿ 7.4ಕಿh ಕಿಲೋವಾಟುಗಳು ಎಂದಾಗುವುವು.

         ಜಲವಿದ್ಯುಚ್ಛಕ್ತಿಯ ಉತ್ಪಾದನೆಯಲ್ಲಿನ ವಿವಿಧ ಹಂತಗಳ ಸೂಕ್ಷ್ಮ ಪರಿಚಯವನ್ನು ಕೆಳಗೆ ಕೊಟ್ಟಿದೆ.

	ಅಣೆಕಟ್ಟು: ವಿದ್ಯುದುತ್ಪಾದನೆಗೆ ಬೇಕಾಗುವಷ್ಟು ನೀರನ್ನು ಸಂಗ್ರಹಿಸುವುದಕ್ಕೋಸ್ಕರ ನದಿಗೆ ಅಣೆಕಟ್ಟು ಕಟ್ಟಬೇಕಾಗುತ್ತದೆ. ಮೊದಲು ನದಿಯ ಪ್ರವಾಹ ಜಲಾಶಯದೊಳಗೆ ಎಷ್ಟು ನೀರನ್ನು ತರುತ್ತದೆ ಎಂಬುದನ್ನೂ ಅಳತೆಗಳ ಮೂಲಕ ಕಂಡುಕೊಂಡು ವಿದ್ಯುಚ್ಛಕ್ತಿಯ ಬೇಡಿಕೆಗೆ ಅನುಸಾರವಾಗಿ ತಿರುಬಾನಿಗಳಿಗೆ ಜಲಾಶಯದಿಂದ ಎಷ್ಟು ನೀರು ಒದಗಿಸಬೇಕೆಂಬುದನ್ನೂ ನಿರ್ಧರಿಸಿ, ಜಲಲೇಖ(ಹೈಡ್ರೋಗ್ರಾಫ್), ರಾಶಿವಕ್ರ(ಮಾಸ್ಕರ್ವ್) ಎಂಬ ರೇಖಾ ನಕ್ಷೆಗಳನ್ನು ಸಿದ್ಧಪಡಿಸಿ ಇವುಗಳ ಸಹಾಯದಿಂದ ಜಲಾಶಯದ ನೀರಿನ ದಾಸ್ತಾನಿನ ಸಾಮಥ್ರ್ಯವನ್ನು ನಿರ್ಣಯಿಸುವರು. ಇದನ್ನು ಪಡೆಯುವದಕ್ಕೆ ಬೇಕಾದ ಅಣೆಕಟ್ಟಿನ ಉದ್ದ ಮತ್ತು ಎತ್ತರಗಳನ್ನೂ ಗೊತ್ತು ಪಡಿಸುವರು.

	ಶಕ್ತಿಕಾಲುವೆ ಅಥವಾ ಸುರಂಗ: ಜಲಾಶಯ ಪ್ರಪಾತಕ್ಕೆ ಬಹಳ ಸಮೀಪವಾಗಿದ್ದ ನಡುವಣ ಪ್ರದೇಶ ಸಮತಟ್ಟಾಗಿದ್ದರೆ, ನೀರನ್ನು ಕಾಲುವೆ ಅಥವಾ ಕೊಳವೆಗಳ ಮೂಲಕ ಪ್ರಪಾತದ ಶಿರಕ್ಕೆ ಕೊಂಡೊಯ್ಯಬಹುದು. ನಡುವಣ ಪ್ರದೇಶ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದರೆ ಸುರಂಗವನ್ನು ಕೊರೆದು ನೀರನ್ನು ಒದಗಿಸಬೇಕಾಗುವುದು.

	ಫೋರ್‍ಬೇ ಮತ್ತು ಪ್ರವೇಶದ್ವಾರ: ಪ್ರಪಾತದ ಶಿರದಲ್ಲಿ ಫೋರ್‍ಬೇ (ಅಗ್ರ ತಟಾಕ) ಎಂಬ ಒಂದು ಸಣ್ಣ ತಟಾಕವಿರುತ್ತದೆ. ಜಲಾಶಯದ ನೀರು ಕಾಲುವೆ ಅಥವಾ ಸುರಂಗದ ಮೂಲಕ ಹರಿದು ಬಂದು, ಅಗ್ರ ತಟಾಕದೊಳಗೆ ಮೊದಲು ತುಂಬಿಕೊಳ್ಳುವಂತೆ ಏರ್ಪಾಡು ಉಂಟು. ತಿರುಬಾನಿಗಳ ಮೇಲಿನ ಹೊರೆ ತ್ವರಿತಗತಿಯಲ್ಲಿ ಏರುಪೇರಾದಾಗ ಸಹ ಅವು ಕೆಲಸ ಮಾಡಲು ಅನುಕೂಲವಾಗುವಂತೆ ಅವುಗಳಿಗೆ ತತ್‍ಕ್ಷಣ ಬೇಕಾಗುವಷ್ಟು ನೀರನ್ನು ಅಗ್ರತಟಾಕ ಒದಗಿಸಬಲ್ಲುದು. ಇದರಲ್ಲಿನ ನೀರು, ಪ್ರವೇಶದ್ವಾರಗಳ ಮೂಲಕ ನೀರನ್ನು ಕೊಂಡೊಯ್ಯುವ ತೂಬುಕೊಳವೆಗಳ ಮೂಲಕ ತಿರುಬಾನಿಯನ್ನು ಪ್ರವೇಶಿಸುತ್ತದೆ. ಪ್ರವೇಶದ್ವಾರಗಳಲ್ಲಿರುವ ಜರಡಿಗಳು ನೀರಿನಲ್ಲಿರಬಹುದಾದ ಕಸಲಡ್ಡಿ ಕಲ್ಲುಚೂರು ಮುಂತಾದ ವಸ್ತುಗಳು ತಿರುಬಾನಿಯನ್ನು ಹೊಗದಂತೆ ತಡೆಯುತ್ತವೆ.

	ತೂಬು ಕೊಳವೆಗಳು(ಪೆನ್ ಸ್ಟಾಕ್ ಪೈಪ್ಸ್): ತಿರಬಾನಿಗಳಿಗೆ ನೀರನ್ನು ಕೊಂಡೊಯ್ಯುವ ಪ್ರಪಾತದ ಇಳಿಜಾರಿನಮೇಲೆ ಹಾಕಿರುವ ದೊಡ್ಡ ಕೊಳವೆಗಳಿವು. ಇವುಗಳ ಮೂಲಕ ಹರಿಯುವ ನೀರಿನ ಒತ್ತಡ ಬಹಳ ಹೆಚ್ಚಾಗಿರುವುದರಿಂದ, ಕೊಳವೆಗಳು ಒಡೆದು ಹೋಗದ ಹಾಗೆ ಇವನ್ನು ಉಕ್ಕಿನಿಂದಲೋ ಇಲ್ಲವೇ ಸಬಲಗೊಳಿಸಿದ ಕಾಂಕ್ರೀಟಿನಿಂದಲೋ ಮಾಡಿರುತ್ತಾರೆ. ಕೊಳವೆಗಳು ಭೂಮಿಯ ಮೇಲಿದ್ದು ಕಾಂಕ್ರೀಟ್ ಅಥವಾ ಮರದ ದೊಡ್ಡ ಹಲ್ಲಣಗಳಿಗೆ ಬಂಧಿಸಲ್ಪಟ್ಟಿರುತ್ತವೆ. ವಾತಾವರಣದ ಉಷ್ಣತೆಯಲ್ಲಿನ ವ್ಯತ್ಯಾಸಗಳಿಗೆ ಅನುಗುಣವಾಗಿ ಕೊಳವೆಗಳು ಸರಾಗವಾಗಿ ಆಕುಂಚನ ಇಲ್ಲವೆ ಸಂಕುಚನಗೊಳ್ಳುವಂತೆ ವಿಶಿಷ್ಟ ರೀತಿಯ ವಿಸ್ತರಣ ಜಾಯಿಂಟುಗಳ ಏರ್ಪಾಡು ಇರುತ್ತದೆ.ಜಲಬಡಿತದಿಂದ ಆಗುವ ಅನಾಹುತಗಳನ್ನು ತಪ್ಪಿಸುವದಕ್ಕೆ ಅಕ್ಷೋಧಕ ತೊಟ್ಟಿಗಳನ್ನು ಕೊಳವೆಗೆ ಹೊಂದಿಸಿರುವುದುಂಟು. ಕೊಳವೆಗಳು ಬಾಗಿರುವ ಕಡೆ ವಾಯುಕವಾಟಗಳಿರುತ್ತವೆ. ಕೊಳವೆಗಳ ಸಂರಕ್ಷತೆಗೆ ಹೆಚ್ಚು ಒತ್ತಡವನ್ನು ಬಿಡುಗಡೆ ಮಾಡುವ ಕವಾಟಗಳು (ರಿಲೀಫ್ ವಾಲ್ವ್ಸ್) ಅಗತ್ಯ.

	ತಿರುಬಾನಿಗಳು: ವಿದ್ಯುಜ್ಜನಕಗಳಿಗೆ ಚಲನ ಶಕ್ತಿಯನ್ನು ಒದಗಿಸುವ ಮೂಲಯಂತ್ರಗಳಿವು. ನೀರಿನ ಎತ್ತರ 50 ಮೀಟರಿಗಿಂತ ಕಡಿಮೆ ಇದ್ದಲ್ಲಿ, ಲಂಬ ಚಾಲಕ ದಂಡವಿರುವ ಪ್ರತಿಕ್ರಿಯಾ ಮಾದರಿಯ ಫ್ರಾನ್ಸಿಸ್ ತಿರುಬಾನಿಗಳನ್ನು ಬಳಸುವುದಿದೆ. 50 ಮೀಟರಿಗಿಂತ ಹೆಚ್ಚು ಇರುವ ಮಧ್ಯಮ ಎತ್ತರದ ಯೋಜನೆಗಳಲ್ಲಿ ಮಟ್ಟಚಾಲಕದಂಡವಿರುವ ಫ್ರಾನ್ಸಿಸ್ ತಿರುಬಾನಿಗಳ ಬಳಕೆ ಉಂಟು. 200 ಮೀಟರುಗಳಿಗಿಂತಲೂ ಹೆಚ್ಚಾದ ನೀರಿನ ಎತ್ತರವಿರುವ, ಯೋಜನೆಗಳಲ್ಲಿ ಪೆಲ್ಟನ್ ತಿರುಬಾನಿಗಳನ್ನು ಬಳಸುತ್ತಾರೆ. ಈ ತಿರುಬಾನಿಗಳ ಭ್ರಮಣವೇಗದಲ್ಲಿ ಬದಲಾವಣೆಯಾದರೆ ವಿದ್ಯುಜ್ಜನಕಗಳು ಉತ್ಪಾದಿಸುವ ಪರ್ಯಾಯ ವಿದ್ಯುತ್ತಿನ ಆವರ್ತಾಂಕ ಬದಲಾಗುತ್ತದೆ. ಆದ್ದರಿಂದ ತಿರುಬಾನಿಗಳ ಭ್ರಮಣವೇಗದಲ್ಲಿ  ಸ್ಥಿರತೆಯನ್ನು ರಕ್ಷಿಸುವುದಕ್ಕೆ ನಿಯಾಮಕಗಳಿರುತ್ತವೆ. (ಗವರ್ನರ್ಸ್) ಎಣ್ಣೆಯ ಒತ್ತಡದಿಂದ ಕೆಲಸ ಮಾಡುವ ಸರ್ವೋಮೋಟಾರುಗಳ ಮೂಲಕ, ಜಲ ಯಂತ್ರಗಳಿಗೆ ನೀರನ್ನು ಒದಗಿಸುವ ಕವಾಟಗಳನ್ನು ಇವು ಮುಚ್ಚಿ ಅಥವ ತೆರೆದು, ಭ್ರಮಣವೇಗದಲ್ಲಾಗುವ ವ್ಯತ್ಯಾಸ ಬಹಳ ಸೂಕ್ಷ್ಮವಗಿ ಒಂದು ಪೂರ್ವ ನಿರ್ಧಾರಿತ ಮಿತಿಯಲ್ಲಿರುವಂತೆ ನಿಯಂತ್ರಿಸುತ್ತವೆ. ನೀರಿನ ಎತ್ತರ ಎರಡು ಮೂರು ಮೀಟರುಗಳಷ್ಟು ಕಡಿಮೆ ಇದ್ದರೂ ವಿಶೇಷ ದಕ್ಷತೆಯಿಂದ ಕೆಲಸ ಮಾಡಬಲ್ಲ ಕಪ್ಲಾನ್ ತಿರುಬಾನಿಯನ್ನು ಅಂಥ ಸಂದರ್ಭಗಳಲ್ಲಿ ಉಪಯೋಗಿಸಬಹುದು. ಕಡಿಮೆ ಎತ್ತರದ ಒಂದು ಉತ್ಪಾದನ ಕೇಂದ್ರದಲ್ಲಿ 14000 ಅಶ್ವ ಸಾಮಥ್ರ್ಯವುಳ್ಳ 5 ಮೀಟರು ಎತ್ತರದ ಕಪ್ಲಾನ್ ತಿರುಬಾನಿಯನ್ನು ಬಳಸಿರುವ  ಸಂದರ್ಭವೂ ಉಂಟು.ತಿರುಬಾನಿಗಳಿಂದ ಹೊರಟುಬರುವ ಕಡಿಮೆ ಒತ್ತಡದ ಮಂದಗತಿಯ ನೀರು ಕೊನೆಯ ಸೆಳವು(ಟೇಲ್ ರೇಸ್) ಎಂಬ ಕಾಲುವೆ ಅಥವಾ ಸಣ್ಣಕೊಳದೊಳಗೆ ಬೀಳುತ್ತದೆ.

	ವಿದ್ಯುದಾಗಾರ: ಪ್ರಪಾತದ ಕೆಳಗೆ ನಿರ್ಮಿಸಲಾಗಿರುವ ವಿದ್ಯುದಾಗಾರಗಳಲ್ಲಿ ತಿರುಬಾನಿಗಳಿಗೆ ನೇರವಾಗಿ ಜೋಡಿಸಿರುವ ವಿದ್ಯುಜ್ಜನಕಗಳನ್ನು(ಜನರೇಟರ್ಸ್) ಸ್ಥಾಪಿಸುತ್ತಾರೆ. ದೂರ ಪ್ರದೇಶಗಳಿಗೆ ಸಾಗಿಸಲು ಅನುಕೂಲಿಸುವ ಪರ್ಯಾಯ ವಿದ್ಯುತ್ತನ್ನು ಇವು ಉತ್ಪಾದಿಸುತ್ತವೆ. ವಿದ್ಯುತ್ತಿನ ಸಂಚರನ ವ್ಯವಸ್ಥೆಗೆ ಬೇಕಾಗುವ ಟ್ರಾನ್ಸ್ ಫಾರ್ಮರುಗಳು, ಸ್ವಿಚ್ಚುಗಳು, ವಿದ್ಯುನ್ಮಾಪಕಗಳು, ಭಾರವಾದ ಯಂತ್ರಭಾಗಗಳನ್ನು ಎತ್ತಬಲ್ಲ ಕ್ರೇನುಗಳು ಮುಂತಾದ ಸಲಕರಣೆಗಳು ಈ ವಿದ್ಯುದಾಗರದಲ್ಲಿರುವುವು.
	
	ಭಾರತದ ಪ್ರಮುಖ ಜಲವಿದ್ಯುದುತ್ಪಾದನಾ ಕೇಂದ್ರಗಳು ಮತ್ತು ಅವುಗಳ ಸಾಮಥ್ರ್ಯ

     ಕೇಂದ್ರಗಳು         ಪಾಲ್ಗೊಂಡಿರುವ ರಾಜ್ಯ          ಉತ್ಪಾದನಾ ಸಾಮಥ್ರ್ಯ
     ಮುಚಕುಂದ         ಆಂಧ್ರಪ್ರದೇಶ,ಒರಿಸ್ಸಾ             115 ಮೆವಾ
     ಶ್ರೀಶೈಲಂ           ಆಂಧ್ರಪ್ರದೇಶ                  900  ಮೆವಾ
     ಕೆಳಗಿನ ಸಿಲೇರು      ಆಂಧ್ರಪ್ರದೇಶ                   460 ಮೆವಾ
     ಮೇಲಿನ ಸಿಲೇರು      ಆಂಧ್ರಪ್ರದೇಶ                   240 ಮೆವಾ
     ಊಕೈ             ಗುಜರಾತ್                     300 ಮೆವಾ
     ಬೈರಾ-ಸಿಯಾಲ್       ಹಿಮಾಚಲ ಪ್ರದೇಶ               180 ಮೆವಾ
     ಸಲಾಲ್            ಜಮ್ಮು ಮತ್ತು ಕಾಶ್ಮೀರ            630  ಮೆವಾ
     ಶರಾವತಿ            ಕರ್ನಾಟಕ                     891 ಮೆವಾ
     ಕಾಳಿನದಿ            ಕರ್ನಾಟಕ                     810 ಮೆವಾ
     ಕಾಳಿನದಿ ಸೂಪ        ಕರ್ನಾಟಕ                     160 ಮೆವಾ
     ಕೇಂದ್ರಗಳು            ಪಾಲ್ಗೊಂಡಿರುವ ರಾಜ್ಯ           ಉತ್ಪಾದನ ಸಾಮಥ್ರ್ಯ      
     ಇಡಿಕ್ಕಿ                ಕೇರಳ                     780 ಮೆವಾ
     ಶಬರಗಿರಿ              ಕೇರಳ                     300 ಮೆವಾ
     ಕೊಯ್ನಾ              ಮಹಾರಾಷ್ಟ್ರ                  1920 ಮೆವಾ
     ಲೋಕ್‍ಟಾಕ್            ಮಣಿಪುರ                  70 ಮೆವಾ
     ಹಿರಾಕುಡ್              ಒರಿಸ್ಸಾ                    307 ಮೆವಾ
     ಮೆಟ್ಟೂರು              ತಮಿಳುನಾಡು                200 ಮೆವಾ
     ಕುಂದಾ                ತಮಿಳುನಾಡು                555 ಮೆವಾ
     ರಿಹಾಂದ್               ಉತ್ತರಪ್ರದೇಶ                300 ಮೆವಾ
     ಶಿವಸಮುದ್ರ              ಕರ್ನಾಟಕ                   42 ಮೆವಾ
     ಶಿಂಷಾ                  ಕರ್ನಾಟಕ                   17 ಮೆವಾ
     ನಾಗಾರ್ಜುನಸಾಗರ         ಆಂಧ್ರಪ್ರದೇಶ                 810 ಮೆವಾ
     ವರಾಹಿ                 ಕರ್ನಾಟಕ                   230 ಮೆವಾ
     ಗೇರುಸೊಪ್ಪ              ಕರ್ನಾಟಕ                   240 ಮೆವಾ
     ಇಂದ್ರಾವತಿ               ಒರಿಸ್ಸಾ                    600 ಮೆವಾ
     ರುಂಗಾಲಿ                ಒರಿಸ್ಸಾ                    250 ಮೆವಾ
     ಮೇಲಿನ ಕೊಲಾಬ್         ಒರಿಸ್ಸಾ                    320 ಮೆವಾ
     ರಾಣಾ ಪ್ರತಾಪಸಾಗರ್       ರಾಜಾಸ್ಥಾನ                  172 ಮೆವಾ
      ಮಹಿ ಬಜಾಜ್           ರಾಜಾಸ್ಥಾನ                  140 ಮೆವಾ
     ಮುಖೇರಿಯಾನ್           ಪಂಜಾಬ್                  207  ಮೆವಾ
     ಆನಂದಪುರಸಾಹಿಬ್        ಪಂಜಾಬ್                   134 ಮೆವಾ
     ರಾಮಗಂಗಾ              ಉತ್ತರಾಂಚಲ                198 ಮೆವಾ
     ಚಿಬ್ರೋ                 ಉತ್ತರಾಂಚಲ                240 ಮೆವಾ      
(ಪರಿಷ್ಕರಣೆ: ಎನ್.ಎಸ್.ಸುಬ್ಬಣ್ಣ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ